“417” ಕಣ್ಣುಗಳಿಂದ ಶ್ರೀ ಕ್ಷೇತ್ರ ರಕ್ಷಣೆ

ಧರ್ಮಸ್ಥಳ: ಭಗವಾನ್ ಶ್ರೀ ಬಾಹುಬಲಿಯ 4ನೇ ಮಹಾಮಸ್ತಕಾಭಿಷೇಕದ ಸಂಭ್ರಮ. ಉದ್ದಗಲಕ್ಕೂ ಬಣ್ಣ-ಬೆಳಕಿನಿಂದ ಸಿಂಗಾರಗೊಂಡ ಧರ್ಮಸ್ಥಳದ ಆವರಣ. ದೇಶದ ಮೂಲೆ ಮೂಲೆಗಳಿಂದ ಆಗಮಿಸಿ ಭಕ್ತಿ-ಭಾವ ಪರವಶತೆಯಲ್ಲಿ ಮಿಂದೇಳುವ ಅಸಂಖ್ಯಾತ ಜನರ ನಡುವೆ ನಾನ್ನೂರಕ್ಕೂ ಅಧಿಕ ಕಣ್ಣುಗಳು ಹಗಲಿರುಳು ಕಾಯುತ್ತಿವೆ. ಅಭೂತಪೂರ್ಣ ಕಾರ್ಯಕ್ರಮವು ಸುಸೂತ್ರವಾಗಿ ನಡೆಯಲು ಕಣ್ಗಾವಲಾಗಿ ಕಾಯುತ್ತಿರುವ ಸಿಸಿಟಿವಿಗಳದೂ ಮಹತ್ತರ ಪಾತ್ರವಿದೆ.
ಸದಾ ಹೊಸತನ, ಸ್ವಚ್ಛತೆ, ಸುರಕ್ಷತೆ,ಶಿಸ್ತುಬದ್ಧ ಕಾರ್ಯಗಳಿಗೆ ಹೆಸರುವಾಸಿಯಾದ ಧರ್ಮಸ್ಥಳದಲ್ಲಿ, 3ಡಿ ಲೇಸರ್ ಶೋ, ಪಂಚಮಹಾವೈಭವವು ಈ ಬಾರಿಯ ಪ್ರಮುಖ ಆಕರ್ಷಣೆ. ಮಹಾಮಸ್ತಕಾಭಿಷೇಕದ ಕ್ಷಣಗಳನ್ನು ಕಣ್ತುಂಬಿಕೊಳ್ಳಲು ದೇಶದೆಲ್ಲೆಡೆಯಿಂದ ಸಹಸ್ರಾರು ಸಂಖ್ಯೆಯಲ್ಲಿ ಜನರು ಆಗಮಿಸುತ್ತಿದ್ದಾರೆ. ಯಾವುದೇ ಅಡಚಣೆಗಳು ಉಂಟಾಗದಂತೆ ಪ್ರತಿಯೊಂದು ಕಾರ್ಯಗಳೂ ಸುಗಮವಾಗಿ ಸಾಗಲು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಮುನ್ನೆಚ್ಚರಿಕೆಯ ಹಾಗೂ ಸುರಕ್ಷತೆಯ ಸಲುವಾಗಿ ನಾಲ್ನೂರಕ್ಕೂ ಅಧಿಕ ಸಿಸಿ ಕ್ಯಾಮೆರಾಗಳನ್ನು ಶ್ರೀ ಕ್ಷೇತ್ರದ ವಿವಿಧೆಡೆ ಅಳವಡಿಸಲಾಗಿದೆ.


372 ಶಾಶ್ವತ ಕ್ಯಾಮೆರಾಗಳ ಜೊತೆಗೆ ಈ ಬಾರಿ 45 ಹೊಸ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ. ಪ್ರಮುಖವಾಗಿ ಬಾಹುಬಲಿ ಬೆಟ್ಟ, ಪಂಚಮಹಾ ವೈಭವ ವೇದಿಕೆ, ಅನ್ನಪೂರ್ಣ ಅನ್ನಛತ್ರ, ವಸ್ತುಪ್ರದರ್ಶನ ಮಂಟಪ, ಪಾರ್ಕಿಂಗ್ ಏರಿಯಾಗಳಲ್ಲಿ ಹೆಚ್ಚಿನ ಮುನ್ನೆಚ್ಚರಿಕೆವಹಿಸಲಾಗಿದೆ. ಮಕ್ಕಳ ಸುರಕ್ಷತೆ, ಜನನಿಯಂತ್ರಣ ವ್ಯವಸ್ಥೆಯನ್ನು ಗಮನದಲ್ಲಿರಿಸಿ ರಕ್ಷಣಾ ಸಿಬ್ಬಂಧಿಗಳು ಸಿಸಿಟಿವಿಗಳ ಪ್ರಯೋಜನ ಪಡೆಯುತ್ತಿದ್ದಾರೆ. ಇವುಗಳ ಜೊತೆಗೆ ವಾಕಿ-ಟಾಕಿ ವ್ಯವಸ್ಥೆಯನ್ನೂ ಮಾಡಲಾಗಿದೆ.

ಬರಹ: ಅಂಬಿಕಾ ಕೈಲಾಸ
ಚಿತ್ರ: ವಿಟ್ಟು ಪ್ರಸನ್ನ